Monday, May 20, 2013

ಸಿಎಂಗೆ ಫೋನ್ ಮಾಡಿ: ಪೊಲೀಸರಿಗೆ ಶ್ರೀಶಾಂತ್

ಮುಂಬಯಿ: ಸ್ಪಾಟ್‌ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿ ಬಿದ್ದು ಈಗ ಪೊಲೀಸರ ಅತಿಥಿಯಾಗಿರುವ ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲರ್ ಶ್ರೀಶಾಂತ್ ಸುಲಭವಾಗಿ ಪೊಲೀಸ್ ಆತಿಥ್ಯವನ್ನು ಸ್ವೀಕರಿಸಲಿಲ್ಲ. ರಾಜಕೀಯದ ಪ್ರಭಾವ ಬೀರಿ ಬಂಧನದಿಂದ ಮುಕ್ತಿಹೊಂದಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮುಂಬಯಿ ಪೊಲೀಸ್ ಮೂಲಗಳ ಪ್ರಕಾರ, ಶ್ರೀಯನ್ನು ಬಂಧಿಸಲು ಪೊಲೀಸರು ಮುಂದಾದಾಗ, ಆತ ತನ್ನಲ್ಲಿದ್ದ ಮೊಬೈಲ್ ಫೋನನ್ನು ಪೊಲೀಸರ ಕಡೆಗೆ ಎಸೆದು, ''ಮಹಾರಾಷ್ಟ್ರ ಅಥವಾ ಕೇರಳದ ಮುಖ್ಯಮಂತ್ರಿಗಳಿಗೆ ಪೋನ್ ಮಾಡಿ, ನಾನ್ಯಾರೆಂಬುದು ಗೊತ್ತಾಗುತ್ತದೆ,'' ಎಂದು ಆರ್ಭಟಿಸಿದ ಶ್ರೀಶಾಂತ್ ಕಸ್ಟಡಿಯಲ್ಲಿ ಬುಕ್ಕಿಗಳು ಇರುವುದನ್ನು ಕಂಡು ಸುಮ್ಮನಾದ.

''ನನಗೆ ಸಾಕಷ್ಟು ರಾಜಕೀಯ ಪ್ರಭಾವವಿದೆ, ಬೇಕಾದರೆ ಯಾವ ಸಿಎಂಗೂ ಫೋನ್ ಮಾಡಬಹುದು,'' ಎಂದು ಬಂಧಿಸಲು ಬಂದ ಪೊಲೀಸರಿಗೆ ಶ್ರೀಶಾಂತ್ ಹೇಳಿರುವುದಾಗಿ ಮುಂಬಯಿ ಪೊಲೀಸ್ ಮೂಲಗಳು ಭಾನುವಾರ ಬಹಿರಂಗಪಡಿಸಿವೆ.

ಬಾಂದ್ರಾದ ಕಾರ್ಟರ್ ರೋಡ್‌ನಲ್ಲಿ ಶ್ರೀಶಾಂತ್ ಮಹಿಳೆಯೊಬ್ಬರೊಂದಿಗೆ ಇದ್ದಿರುವುದಾಗಿ ಡೆಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ನಂತರ ಕಾರನ್ನು ಓವರ್‌ಟೇಕ್ ಮಾಡಿದಾಗ ಆತ ನಿಲ್ಲಿಸಿದ ಎಂದು ತಿಳಿದು ಬಂದಿದೆ.








ಅಷ್ಟು ಹಣ ಯಾರು ಕೊಟ್ಟರು?

ಬುಕ್ಕಿಗಳು ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಬೌಲರ್‌ಗಳಿಗೆ ಹೆಚ್ಚಿನ ಹಣವನ್ನು ಸಂದಾಯ ಮಾಡಿದ್ದಾರೆ. ಅಜಿತ್ ಚಾಂದಿಲಾ ಹಣವನ್ನು ತಮ್ಮ ಮನೆಗೆ ಕಳುಹಿಸುವಂತೆ ಬುಕ್ಕಿಗಳಿಗೆ ಸೂಚಿಸಿದ್ದಾರೆ.

ದೂರವಾಣಿಯಲ್ಲಿ ನಡೆದಿರುವ ಮಾತುಕತೆಯನ್ನು ಆಲಿಸಿದಾಗ, ಚಾಂದಿಲಾ ತನ್ನ ಪತ್ನಿಗೆ ದೂರವಾಣಿ ಮೂಲಕ ಮಾತನಾಡಿ, ''ಒಬ್ಬ ವ್ಯಕ್ತಿ ಹಣ ತಂದು ಕೊಡುತ್ತಾರೆ, ಅದನ್ನು ಸ್ವೀಕರಿಸು,'' ಎಂದು ಹೇಳಿದ್ದಾನೆ. ಆಗ ಪತ್ನಿ ಸಹಜವಾಗಿ, ''ಅಷ್ಟು ಹಣ ಯಾರು ಕೊಟ್ಟರು? ಎಲ್ಲಿಂದ ಬಂತು?'' ಎಂದು ಪ್ರಶ್ನಿಸಿರುವುದಾಗಿ ತಿಳಿದು ಬಂದಿದೆ.

ಬುಕ್ಕಿಗಳಿಂದ ಪಡೆದ ಹಣವನ್ನು ಮೂವರು ಬೌಲರ್‌ಗಳು ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಮೋಜಿನ ಪಾರ್ಟಿಗೆ ವ್ಯಯ ಮಾಡಿದ್ದಾರೆ. ಚಾಂದಿಲಾ 2.5 ಲಕ್ಷ ರೂ. ವ್ಯಯ ಮಾಡಿ ಒಂದು ಜತೆ ಜೀನ್ಸ್ ಪ್ಯಾಂಟ್ ಮತ್ತು ದುಬಾರಿ ವಾಚ್ ಖರೀದಿಸಿದ್ದಾರೆ.

ಭೋಜನ ಕೂಟಕ್ಕೆ ರಾಯಲ್ಸ್ ತಂಡದ ಬ್ರಾಡ್ ಹಾಡ್ಜ್, ಕೆವೊನ್ ಕೂಪರ್ ಹಾಗೂ ಸಿದ್ಧಾರ್ಥ ತ್ರಿವೇದಿ ಅವರನ್ನು ಕರೆಯುವಂತೆ ಬುಕ್ಕಿಗಳು ಕೇಳಿಕೊಂಡಿದ್ದರು. ಆದರೆ ಈ ಮೂವರು ಅದಕ್ಕೆ ಒಪ್ಪಿರಲಿಲ್ಲ.

ಮಾಜಿ ರಣಜಿ ಆಟಗಾರನ ಬಂಧನ

ಇದೇ ವೇಳೆ ಡೆಲ್ಲಿ ಪೊಲೀಸರು ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಬುಕ್ಕಿಗಳನ್ನು ಬಂಧಿಸಿದ್ದಾರೆ. 2003-2005ರ ಅವಧಿಯಲ್ಲಿ ವಿದರ್ಭ ತಂಡದ ಪರ ರಣಜಿ ಆಡಿದ್ದ ಮನೀಶ್ ಬುದೇವಾ ಅವರನ್ನು ಬಂಧಿಸಿರುವುದಾಗಿ ಡೆಲ್ಲಿ ಪೊಲೀಸರು ತಿಳಿಸಿದ್ದಾರೆ.

ಸುನಿಲ್ ಭಾಟಿಯಾ ಹಾಗೂ ಕಿರಣ್ ಡೋಲೆ ಬಂಧಿತ ಮತ್ತಿಬ್ಬರು ಬುಕ್ಕಿಗಳು.

ಜಿಜು ಜನಾರ್ದನ್ ಶ್ರೀಶಾಂತನ ಸ್ಯಾಟಲೈಟ್ ಇದ್ದಂತೆ: ಮ್ಯಾಥ್ಯು

ಹೊಸದಿಲ್ಲಿ: 
ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದು ಜೈಲು ಸೇರಿರುವ ಭಾರತ ತಂಡದ ವೇಗದ ಬೌಲರ್ ಶ್ರೀಶಾಂತ್ ಅವರು ಬುಕಿ ಜಿಜು ಜನಾರ್ದನ್ ಜತೆ ಹತ್ತಿರಂದ ಸಂಬಂಧ ಹೊಂದಿದ್ದಾರೆ, ಶ್ರೀ ಪಾಲಿಗೆ ಜಿಜು 'ಸ್ಯಾಟಲೈಟ್' ಇದ್ದಂತೆ ಎಂದು ಕೇರಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಟಿ.ಸಿ. ಮ್ಯಾಥ್ಯು ಹೇಳಿದ್ದಾರೆ.


''ಸ್ಯಾಟಲೈಟ್ ರೀತಿಯಲ್ಲಿ ಜಿಜು ಯಾವಾಗಲೂ ಶ್ರೀಶಾಂತ್ ಹತ್ತಿರದಲ್ಲೇ ಸುತ್ತುತ್ತಿರುತ್ತಾನೆ. ಶ್ರೀಶಾಂತ್ ಜತೆ ಆತ ಕೇರಳದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಇರುತ್ತಾನೆ. ಶ್ರೀಶಾಂತ್ ಕಾರಿನಲ್ಲಿ ನಗರದಲ್ಲಿ ಕಾಣಿಸಿಕೊಂಡರೆ ಆತ ಅಲ್ಲಿಯೂ ಹಾಜರಿರುತ್ತಾನೆ, ನಾವು ಆತ ಶ್ರೀಶಾಂತನ ಆತ್ಮೀಯ ಗೆಳೆಯ ಎಂದೇ ತಿಳಿದಿದ್ದೆವು,'' ಎಂದು ಮ್ಯಾಥ್ಯು ಖಾಸಿಗಿ ಸುದ್ದಿ ಚಾನೆಲ್‌ಗೆ ತಿಳಿಸಿದ್ದಾರೆ.

''ಮಲಯಾಳಿ ಆದ ಕಾರಣ ಆತ ಕೇರಳ ತಂಡದಲ್ಲಿ ಆಡಲು ಅರ್ಹರಾಗಿರುತ್ತಾನೆ, ಈ ಕಾರಣಕ್ಕಾಗಿ ಆತ ಶ್ರೀಶಾಂತ್ ಅವರನ್ನು ಇಲ್ಲಿಗೆ ತಂದು ಕೇರಳ ರಣಜಿ ತಂಡದಲ್ಲಿ ಆಡುವ ಅವಕಾಶ ಕಲ್ಪಿಸಿದ್ದಾನೆ, '' ಎಂದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದ 11 ಮಂದಿ ಬುಕ್ಕಿಗಳಲ್ಲಿ ಜಿಜು ಕೂಡ ಸೇರಿದ್ದಾನೆ.

''ಆತನ ಉದ್ದೇಶ ಏನೆಂಬುದರ ಬಗ್ಗೆ ನಾವು ಎಂದೂ ಸಂಶಯಿಸಿಲ್ಲ, ಸಾಮಾನ್ಯ ವ್ಯಕ್ತಿಯಂತೆ ಆತನನ್ನು ಪರಿಗಣಿಸಿದೆವು. ಆತ ಯಾವಾಗಲೂ ಶ್ರೀಶಾಂತ್ ಜತೆ ಇರುವುದನ್ನು ಮಾತ್ರ ಜನರು ತಿಳಿದಿದ್ದಾರೆ,'' ಎಂದು ಮ್ಯಾಥ್ಯು ಹೇಳಿದರು.

No comments:

Post a Comment